ಬಣ್ಣದೊಕುಳಿಯಲ್ಲಿ ಮಿಂದೆದ್ದ ನಗರಿ

 ಶಿವಮೊಗ್ಗ ನಗರ ಬಣ್ಣದೋಕುಳಿಯಲ್ಲಿ ಮಿಂದೆದ್ದಿತ್ತು. ಮಂಗಳವಾರ ನಗರದಲ್ಲಿ  ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು. ಯುವಕ ಯುವತಿಯರು ಬಣ್ಣ ಬಳಿದುಕೊಂಡು ಪರಸ್ಪರ ಎರಚಿಕೊಂಡು ಬೈಕುಗಳಲ್ಲಿ ಸವಾರಿ ಮಾಡುತ್ತ ರಂಗು ರಂಗಿನ ಹೋಳಿ ಸಂಭ್ರಮದಲ್ಲಿ ಮಿಂದೆದ್ದರು.

ವಿಶೇಷ ಅಂದ್ರೆ ಹೊಳಿ ಹಬ್ಬದ ಸಂಭ್ರಮಾಚರಣೆಯೂ ಕಳೆದ ವರ್ಷದಂತೆ ಈ ಬಾರಿಯೂ  ಗೋಪಿ ವೃತ್ತದಲ್ಲಿಯೇ ಕೇಂದ್ರಿಕೃತವಾಗಿ, ಇಡೀ ಹಬ್ಬವೇ ರಂಗೇರುವಂತೆ ಮಾಡಿತು.  ಸಾವಿರಾರು ಸಂಖ್ಯೆಯಲ್ಲಿ  ಯುವಕ – ಯುವತಿಯರು ಹೆಚ್ಚಾಗಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು, ಹಬ್ಬ ಕಳೆಗಟ್ಟುವಂತೆ ಮಾಡಿದರು. ಬೆಳಗ್ಗೆಯಿಂದಲೇ ಮೈ ತುಂಬಾ ಬಣ್ಣ ಬಳಿದುಕೊಂಡು, ಗೆಳೆಯರಿಗೂ ವಿವಿಧ ಬಗೆಯ ಬಣ್ಣ ಎರಚಿ, ಸಂಭ್ರಮ ಪಟ್ಟರು. ಡಿ.ಜೆ.ಯೊಂದಿಗೆ ಹೆಜ್ಜೆ ಹಾಕಿ ಬಣ್ಣದ ನೀರುಗಳನ್ನು ಎರಚಿ ನೃತ್ಯಮಾಡುತ್ತ ಬಣ್ಣದಲ್ಲಿ ಮಿಂದು ಹುಚ್ಚೆದ್ದು ಕುಣಿದರು.

ಹಿಂದೂ  ಕೇಸರಿ ಅಲಂಕಾರ ಸಮಿತಿ ವತಿಯಿಂದ ನಗರದ ಗೋಪಿವೃತ್ತದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಡಿ.ಜೆ.ನೃತ್ಯ ಮತ್ತು ದೊಡ್ಡ ಟ್ಯಾಂಕರ್‌ಗಳ ಮೂಲಕ ಕಾರಂಜಿ ನೃತ್ಯ ಆಯೋಜಿಸಲಾಗಿತ್ತು.ಆದರೆ ಬರಗಾಲದ ಹಿನ್ನೆಲೆಯಲ್ಲಿ ಯಥೇಚ್ಚ ನೀರಿ ಬಳಕೆಗೆ ಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ  ಕಾರಂಜಿ ನೃತ್ಯವನ್ನು ಕಡಿಮೆಗೊಳಿಸಿ ಡಿಜೆಗೆ ಯುವಕ ಯುವತಿಯರು ಹೆಜ್ಜೆ ಹಾಕಿದ್ದು ಕಂಡುಬಂದಿತು.ಒಬ್ಬರಿಗೊಬ್ಬರು ಬಣ್ಣದ ನೀರನ್ನು ಎರಚುವ ಮೂಲಕ ಕುಣಿದು ಕುಪ್ಪಳಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ದೃಷ್ಟಿಯಿಂದ ನಗರದ ಗೋಪಿ ವೃತ್ತದ ಸುತ್ತ ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ  ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಪೊಲೀಸರು ರಕ್ಷಣಾ ವ್ಯವಸ್ಥೆಯನ್ನು ಕೂಡ ಕೈಗೊಂಡಿದ್ದರು. ಸಂಭ್ರಮದ ನೆಪದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅಸ್ಪದ ಸಿಗಬಾರದೆಂಬ ಹಿನ್ನೆಲೆಯಲ್ಲಿ ಅಲ್ಲಲ್ಲಿ ಪೊಲೀಸ್‌ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ಅವರು ಹೋಳಿ ಹಬ್ಬದ ಆಚರಣೆಯ ಮೇಲೆ  ಕಣ್ಗಾವಲು ಇರಿಸಿದ್ದರು.

ಗೋಪಿ ವೃತ್ತದಲ್ಲಿ ಹೋಳಿ ಆಚರಣೆ ಇದ್ದ ಕಾರಣಕ್ಕೆ ವಾಹನಗಳ ಸಂಚಾರ ಮಾರ್ಗ ಬದಲಿಸಲಾಗಿತ್ತು. ಬಾಲರಾಜ್ ಅರಸ್ ರಸ್ತೆ, ದುರ್ಗಿಗುಡಿ ರಸ್ತೆ, ಬಿ.ಹೆಚ್.ರಸ್ತೆಗಳಲ್ಲಿ ವಾಹನ ಸಂಚಲನವನ್ನು ನಿಬಂಧಿಸಿ, ಬೇರೆ ಕಡೆಗಳಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿತ್ತು. ಬಿ.ಎಚ್.‌ ರಸ್ತೆಯ ಮಾರ್ಗವಾಗಿ ನೆಹರು ರಸ್ತೆ ಮೂಲಕ ವಾಹನಗಳಿಗೆ ಬಿ.ಎಚ್.‌ ರಸ್ತೆಯಲ್ಲಿನ ಕರ್ನಾಟಕ ಸಂಘ ಪಕ್ಕದ ರಸ್ತೆಯಲ್ಲಿ ಮಹಾವೀರ ಸರ್ಕಲ್‌ ಗೆ ಬಂದು ಸೇರಲು ವ್ಯವಸ್ಥೆ ಮಾಡಲಾಗಿತ್ತು.

ಹೋಳಿ ಹಬ್ಬವನ್ನು ಕಣ್ಣ್ತುಂಬಿಕೊಳ್ಳಲು, ಎಂ.ಜೆ.ಪ್ಯಾಲೇಸ್ ಕಟ್ಟಡ, ಶ್ರೀನಿಧಿ ಮಹಿಳೆ ಇರುವ ಕಟ್ಟಡ ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳ ಬಾಲ್ಕನಿಯಲ್ಲಿ ಜನರು ನಿಂತು ಹಬ್ಬವನ್ನು ವೀಕ್ಷಿಸಿದರು.
ಹೋಳಿ ಹಬ್ಬವನ್ನು ನೋಡಲೆಂದೇ ನೂರಾರು ಸಂಖ್ಯೆಯಲ್ಲಿ ವಯಸ್ಕರು ಕೂಡ ಬಂದಿದ್ದರು. ಜನರು ಸೆಲ್ಪಿ ಪೋಟೋಗಳನ್ನು ವೀಡಿಯೋಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಖುಷಿಪಟ್ಟರು.

ಇದಲ್ಲದೆ ನಗರದ ಎಲ್ಲೆಡೆ ಹೋಳಿ ಹಬ್ಬ ಆಚರಿಸಿದ್ದು ಕಂಡುಬಂದಿತು. ಬಸ್‌ನಿಲ್ದಾಣ ಗಾಂಧಿಬಜಾರ್, ಕೋಟೆರಸ್ತೆ, ಪೊಲೀಸ್ ಚೌಕಿ, ವಿದ್ಯಾನಗರ , ಕಲ್ಲಳ್ಳಿ, ಡಿ.ವಿ.ಎಸ್. ಕಾಲೇಜು, ಇಂಜಿನಿಯರಿಂಗ್ ಕಾಲೇಜ್, ಸಾಗರ ರಸ್ತೆ, ಗೋಪಾಳ ಬಡಾವಣೆ ಮುಂತಾದ ಅನೇಕ ಕಡೆಗಳಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಕೂಡ ಹಬ್ಬದಲ್ಲಿ ಪಾಲ್ಗೊಂಡರು.
ಅನೇಕ ಯುವಕರು ಮತ್ತು ಯುವತಿಯರು ಕೂಡ ತಮ್ಮ ಬೈಕ್‌ಗಳಲ್ಲಿ ಸಂಚರಿಸುತ್ತ ಘೋಷಣೆ ಕೂಗುತ್ತ ಪರಸ್ಪರ ಬಣ್ಣ ಎರಚುತ್ತ ಮೂರು ಜನ ಸವಾರಿ ಮಾಡುತ್ತ ನಗರದ ತುಂಬ ಬೈಕ್ ರ್‍ಯಾಲಿ ಮಾಡಿ ಹಬ್ಬದಲ್ಲಿ ಪಾಲ್ಗೊಂಡಿದ್ದು ಕಂಡುಬಂದಿತು.

ಹೋಳಿ ಹಬ್ಬ ಸಾಮರಸ್ಯದ ಸಂಕೇತವಾಗಿದೆ. ಬಣ್ಣಗಳನ್ನುಎಲ್ಲರೂ ಸೇರಿ ಎರಚುವುದು ಸಹಿಷ್ಣುತೆಯ ಸಂಕೇತವಾಗಿದೆ. ಶುದ್ಧ ಮನಸ್ಸಿನ ಈ ಹೋಳಿ ಹಬ್ಬಕ್ಕೆ ಯುವಕರ ರಂಗ ರಂಗಿನ ಭಾವನೆಗಳು ಕೂಡ ಜೊತೆಯಾಗಿ ಹಬ್ಬದ ಸಂಭ್ರಮವನ್ನು ಹಿಮ್ಮಡಿಸಿತ್ತು. ಈ ಬಾರಿ ಕರ್ಕಶ ಶಬ್ದಗಳನ್ನು ಹೊರಹಾಕುವ ಬೈಕ್‌ಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ ಹಲವು ಕಡೆ ಕಂಡುಬಂದಿತು. ಕೆಲವು ಕಡೆ ಸಾರ್ವಜನಿಕರಿಗೆ ಕಿರಿಕಿರಿಯೂ ಆಯಿತು. ಒಟ್ಟಾರೆ ಈ ಬಾರಿಯ ಹೋಳಿ ಹಬ್ಬ ಅತ್ಯಂತ ಸಂಭ್ರಮದಿಂದ ನಡೆಯಿತು.


Posted

in

by

Tags:

Comments

Leave a Reply

Your email address will not be published. Required fields are marked *