ಗೀತನಿಗೊಂದು  ಅವಕಾಶ ಕೊಡಿ‌ :  ಶಿವರಾಜ್‌ ಕುಮಾರ್‌  ಭಾವುಕ ಮನವಿ

ಗೀತನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಆಕೆಗೆ ಜನರಿಗಾಗಿ ಕೆಲಸ ಮಾಡುವ ಆಸೆ ಇದೆ. ಒಂದೇ ಒಂದು ಅವಕಾಶ ಕೊಡಿ ಎಂದು ಜನಪ್ರಿಯ ನಟ ಶಿವರಾಜ್‌ಕುಮಾರ್ ತಮ್ಮ ಪತ್ನಿ ಗೀತಾ ಪರ ಶಿವಮೊಗ್ಗ ಜಿಲ್ಲೆ ಜನತೆಯಲ್ಲಿ ಭಾವುಕವಾಗಿ ಮನವಿ ಮಾಡಿದ್ದಾರೆ.

ಟಿಕೆಟ್‌ ಘೋಷಣೆ ಯ ನಂತರ ಗೀತಾ ಶಿವರಾಜ್‌ ಕುಮಾರ್‌ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ನಂತರ ಶಿವಮೊಗ್ಗ ನಗರದ ಸಾಗರ ರಸ್ತೆ ಲಗಾನ್‌ ಕಲ್ಯಾಣ ಮಂದಿರದ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಗೀತ ಅವರಿಗೆ ಜೀವನದಲ್ಲಿ ಅನುಭವವಿದೆ. 2014 ರ ಚುನಾವಣೆಯಲ್ಲಿ ಸೋತಿದ್ದರೂ ಅದರ ಬಗ್ಗೆ ಧೃತಿಗೆಟ್ಟಿಲ್ಲ. ಸ್ಪರ್ಧೆ ಎಂದ ಮೇಲೆ ಸೋಲು – ಗೆಲುವು ಇದ್ದಿದ್ದೆ. ಆದರೆ ಚುನಾವಣೆಯಲ್ಲಿ ಜನರಿಗೆ ಭರವಸೆಗಳನ್ನು ನೀಡುವುದು ಮುಖ್ಯವಲ್ಲ. ಅದನ್ನು ಈಡೇರಿಸಬೇಕು. ಮತ ಕೇಳುವಾಗ ಜನರೊಂದಿಗೆ ಬಾಂಧವ್ಯ ಬೆಳೆಯುತ್ತದೆ. ಜನರಿಗೆ ಕೇವಲ ಭರವಸೆಗಳನ್ನು ನೀಡಬಾರದು ಆಗುವ ಕೆಲಸವನ್ನು ಆಗುತ್ತದೆ. ಆಗದ ಕೆಲಸವನ್ನು ಆಗುವುದಿಲ್ಲ ಎಂದು ನೇರವಾಗಿ ಹೇಳಬೇಕು ಅದುವೇ ನಿಜವಾದ ರಾಜಕಾರಣ ಎಂದು ವಿಶ್ಲೇಷಿಸಿದರು.

ಗೀತಾ ಅವರು ಬಂಗಾರಪ್ಪ ಅವರ ಮಗಳಾಗಿ, ಡಾ ರಾಜಕುಮಾರ್ ಅವರ ಸೊಸೆಯಾಗಿ, ಶಿವರಾಜ್‌ ಕುಮಾರನ ಹೆಂಡತಿಯಾಗಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮಹಿಳೆಯರ,ಮಕ್ಕಳ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಅವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ಅವರನ್ನು ಸಂಸದರನ್ನಾಗಿ ಯಾಕೆ ಮಾಡಬಾರದು?, ಗೀತನಿಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಇದೇ ವೇಳೆ ಆಗದು ಎಂದು ಕೈ ಕಟ್ಟಿಕುಳಿತರೆ ಸಾಗದು ಕೆಲಸವು ಮುಂದೆ ಮನಸ್ಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದು… ಹಾಡನ್ನು ಹಾಡುವ ಮೂಲಕ ಶಿವರಾಜಕುಮಾರ್ ತಮ್ಮ ಪತ್ನಿಯ ಸ್ಪರ್ಧೆಯ ಉತ್ಸಾಹವನ್ನು ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಗೀತಾಶಿವರಾಜಕುಮಾರ್ ಮಾತನಾಡಿ, ನನ್ನ ತಂದೆ ಮೊದಲ ಬಾರಿಗೆ ಶಾಸಕರಾಗಿದ್ದಾಗ ನಾನಿನ್ನೂ ಎರಡು ವರ್ಷದವಳು, ಅಲ್ಲಿಂದ ಇಲ್ಲಿಯವರೆಗೂ ರಾಜಕಾರಣವನ್ನು ನೋಡಿಕೊಂಡು ಬಂದಿದ್ದೇನೆ. ನನ್ನ ತಂದೆ ನನ್ನನ್ನು ನಿಮ್ಮಂತೆ ಸಾಮಾನ್ಯಳನ್ನಾಗಿ ಬೆಳೆಸಿದರು. ನಾನು ಈ ಜಿಲ್ಲೆಯ ಮಗಳು. ನನಗೆ ನೀವು ಓಟು ಕೊಡಲೇಬೇಕು. ಮನೆಯ ಮಗಳನ್ನು ಬರಿಗೈಲಿ ಕಳಿಸಬೇಡಿ,ನಾನು ಗೆದ್ದು ಸಂಸತ್ತಿನಲ್ಲಿ ಶಿವಮೊಗ್ಗದ ಧ್ವನಿಯಾಗಿರುತ್ತೇನೆ. ಜಿಲ್ಲೆಗೆ, ಪಕ್ಷಕ್ಕೆ ,ಪಕ್ಷದ ನಾಯಕರಿಗೆ ಎಂದಿಗೂ ಕೆಟ್ಟ ಹೆಸರು ತರಲಾರೆ. ತಂದೆಯಂತೆ ಜನರಿಗಾಗಿ ದುಡಿಯುತ್ತೇನೆ ಎಂದು ಭಾವುಕರಾಗಿ ಮನವಿ ಮಾಡಿಕೊಂಡರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಮಾಜಿ ಸಂಸದ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಮುಖಂಡರಾದ ಎಂ.ಶ್ರೀಕಾಂತ್, ಆರ್ ಪ್ರಸನ್ನಕುಮಾರ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್ ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


Posted

in

by

Tags:

Comments

Leave a Reply

Your email address will not be published. Required fields are marked *