ಮೋದಿ ಭೇಟಿಯಿಂದ ದೂರ ಉಳಿದ ಈಶ್ವರಪ್ಪ :ಬಂಡಾಯ ಸ್ಪರ್ಧೆಯನ್ನು ಇನ್ನಷ್ಟು ಖಚಿತಪಡಿಸಿದರೇ?

ಲೋಕಸಭೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸೋಮವಾರ ನಗರದಲ್ಲಿ ಹಮ್ಮಿಕೊಂಡಿರುವ ಪ್ರಧಾನಿ ಮೋದಿ ಸಮಾವೇಶದಿಂದ ದೂರ ಉಳಿದಿದ್ದಾರೆ.
ಈಶ್ವರಪ್ಪ ಮನವೊಲಿಸುವ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಪ್ರಯತ್ನ, ಆರ್.ಎಸ್.ಎಸ್. ನಾಯಕರ ವಿಫಲಗೊಂಡಿದೆ.
ತಮ್ಮ ಪುತ್ರ ಕೆ.ಇ. ಕಾಂತೇಶ್ ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪುತ್ತಿದ್ದಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವುದು ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರಿಗೆ ತಲೆನೋವು ತಂದಿದೆ.
ಅಸಮಾಧಾನಗೊಂಡಿರುವ ಈಶ್ವರಪ್ಪ ಅವರನ್ನು ಸಮಾಧಾನಪಡಿಸಲು ಹಾಗೂ ನಿರ್ಧಾರವನ್ನು ಪರಿಶೀಲಿಸುವಂತೆ ಕೇಂದ್ರ ಹಾಗೂ ರಾಜ್ಯ ನಾಯಕರಿಂದ ಈಶ್ವರಪ್ಪರ ಮನವೊಲಿಸುವ ಪ್ರಯತ್ನ ವಿಫಲವಾಗಿದೆ.
ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್, ಸಂಘಟನಾ ಕಾರ್ಯದರ್ಶಿ ರಾಜೇಶ್, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಎಂಎಲ್‌ಸಿಗಳಾದ ಎನ್.ರವಿಕುಮಾರ್, ಡಿ.ಎಸ್. ಅರುಣ್ ಮತ್ತಿತರರು ಈಶ್ವರಪ್ಪ ಮನೆಗೆ ಭೇಟಿ ನೀಡಿ ನಿರ್ಧಾರ ಬದಲಿಸುವಂತೆ ಮನವಿ ಮಾಡಿದರು. ಆದರೆ ಈಶ್ವರಪ್ಪ ನಿರ್ಧಾರ ಬದಲಿಸಿಲ್ಲ.
ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾವುದಕ್ಕೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂಬ ಈಶ್ವರಪ್ಪ ಹೇಳಿಕೆ ಪಕ್ಷಕ್ಕೆ ಕಗ್ಗಂಟಾಗ ತೊಡಗಿದೆ. ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ ಅಚಲ. ಹೀಗಾಗಿಯೇ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಪ್ರಧಾನಿ ಮೋದಿ ಅವರಲ್ಲಿ ಕ್ಷಮೆ ಕೇಳುತ್ತೇನೆ ಚುನಾವಣೆಯಲ್ಲಿ ಗೆದ್ದ ಬಳಿಕ ಅವರನ್ನು ಭೇಟಿ ಮಾಡಿ ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.
ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದೇನೆ. ಹಿಂದೆ ಸರಿಯುವ ಮಾತೇ ಇಲ್ಲ. ಯಡಿಯೂರಪ್ಪ ಹಿಂದುತ್ವದ ಪರವಾಗಿ ಕೆಲಸ ಮಾಡಿದವರಿಗೆ ಮೋಸ ಮಾಡಿದ್ದಾರೆ. ನಾನು ಚುನಾವಣೆಗೆ ಏಕೆ ಸ್ಪರ್ಧೆ ಮಾಡ್ತಿದ್ದೇನೆ ಎಂಬುದನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ. ಪಕ್ಷ ಶುದ್ದೀಕರಣ ಆಗಬೇಕು ಎಂಬ ಕಾರಣಕ್ಕೆ ಸ್ಪರ್ಧೆ ಮಾಡಿರುವುದಾಗಿ ಹೇಳಿದ್ದೇನೆ. ಕಾಂತೇಶ್‌ಗೆ ಎಂಎಲ್‌ಸಿ ಮಾಡು ತ್ತೇವೆ ಎಂಬ ಆಫರ್ ನೀಡಿದರು. ಆದರೆ ಪಕ್ಷ ಅಪ್ಪ-ಮಕ್ಕಳ ಕೈಯ ಲ್ಲಿದ್ದು ಹಿಂದುತ್ವದ ನಾಯಕರನ್ನು ತುಳಿಯುತ್ತಿದ್ದಾರೆ ಎಂದು ಅಸಮಧಾನ ಹೊರಹಾಕಿದ್ದಾರೆ.
ಒಟ್ಟಾರೆ ಈಶ್ವರಪ್ಪ ಅವರ ರೆಬೆಲ್ ನಡೆ ಬಿಜೆಪಿಗೆ ತಲೆನೋವು ತಂದಿರುವುದಷ್ಟೇ ಅಲ್ಲದೆ, ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಈ ರೀತಿಯ ಬೆಳವಣಿಗೆ ಪಕ್ಷದ ಕಾರ್ಯಕರ್ತರಲ್ಲೂ ಗೊಂದಲ ಮೂಡಿಸಿದೆ.
…………………..


Posted

in

by

Tags:

Comments

Leave a Reply

Your email address will not be published. Required fields are marked *