ಶಿವಮೊಗ್ಗ : ತೀವ್ರ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ಮೈಸೂರಿನಲ್ಲಿ ನಡೆದಿದ್ದು, ಸಂಜೆ ಲಭ್ಯವಾದ ಮಾಹಿತಿ ಪ್ರಕಾರ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಭೋಜೇಗೌಡ ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ಯ ಮತಗಳಲ್ಲಿಯೇ ಅವರಿಗೆ ಗೆಲುವು ಆಗಿದೆ.
ಸಂಜೆ ಮತ ಎಣಿಕೆ ಕಾರ್ಯ ಮುಕ್ತಾಯವಾದಾಗ ಅವರು ೫೨೬೭ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಮಾಹಿತಿ ಲಭ್ಯವಾಗಿತ್ತು. ಅವರಿಗೆ ಒಟ್ಟು ೧೯. ೪೭೯ ಮತಗಳು ಲಭ್ಯವಾಗಿದ್ದವು. ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಅವರು ೪೫೬೨ ಮತ ಪಡೆದು ಸೋಲು ಅನುಭವಿಸಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಭೋಜೇಗೌಡ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಅವರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಕಾರಣಕ್ಕೆ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆಯೇ ಹೆಚ್ಚಾಗಿದ್ದ ಕಾರಣಕ್ಕೆ ಭೋಜೇಗೌಡರಿಗೆ ಈ ಬಾರಿ ದೊಡ್ಡ ಸವಾಲೇ ಇದೆ ಎಂದು ವಿಶ್ಲೇಷಲಾಗಿತ್ತಾದರೂ, ಅವರು ತಮ್ಮ ಅಧಿಕಾರಾವದಿಯಲ್ಲಿ ಶಿಕ್ಷಕರ ನಡುವೆ ನೇರಾ ನೇರ ಸಂಪರ್ಕ ಹೊಂದಿದ್ದಲ್ಲದೆ, ಅವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಾ ಬಂದಿದ್ದಾರೆಂದೇ ಶಿಕ್ಷಕರ ವಲಯ ಹೇಳುತ್ತಿದ್ದ ಕಾರಣಕ್ಕೆ, ಅವರ ಗೆಲುವಿನ ಬಗ್ಗೆಯೇ ಹೆಚ್ಚು ಮಾತುಗಳಿದ್ದವು. ಅದು ಚುನಾವಣೆಯ ಫಲಿತಾಂಶದಲ್ಲೂ ಸಾಬೀತಾಯಿತು.
ಇದೇ ವೇಳೆ ನೈರುತ್ಯ ಪರದವೀಧರ ಕ್ಷೇತ್ರದಲ್ಲಿ ಈತನಕ ( ರಾತ್ರಿ ೮ ಗಂಟೆಗೆ) ಲಭ್ಯವಾದ ಮಾಹಿತಿ ಪ್ರಕಾರ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ಅವರು ಅತ್ಯಧಿಕ ಮತಗಳನ್ನು ಪಡೆಯುವುದರ ಮೂಲಕ ಗೆಲುವಿನ ಸನಿಹದಲ್ಲಿದ್ದರು. ೨ನೇ ಸುತ್ತಿನ ಮತ ಎಣಿಕೆ ವಿವರ ಲಭ್ಯವಾದಾಗ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ಅವರು ೧೪ , ೦೫೪ ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು೪೫೫೭ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಅವರು ೪೮೭೭ ಪಡೆದಿದ್ದರು. ಆಗ ಒಟ್ಟು ೪೨ ಸಾವಿರ ಮತಗಳ ಎಣಿಕೆ ಆಗಿದ್ದವು.