ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಶ್ರೀಮತಿ ಪ್ರತಿಭಾ ಅವರು ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ʼ ಸಂಭವಾಮಿ ಯುಗೇ ಯುಗೇʼ ಚಿತ್ರವು ಇದೇ ತಿಂಗಳು 21ರಂದು ಬಿಡುಗಡೆಯಾಗಲಿದೆ. ಜಯ್ ಶೆಟ್ಟಿ – ನಿಶಾ ರಜಪೂತ್ ಹಾಗೂ ಮಧುರಾಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ, ನಾನು ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಸೋಷಿಯಲ್ ಕಂಟೆಂಟ್ ಇಟ್ಟುಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ಫ್ಯಾಮಿಲಿ ಆಡಿಯನ್ಸ್ ಕೂತು ನೋಡುವಂಥ ವಿಭಿನ್ನ ಕಮರ್ಷಿಯಲ್ ಕಾನ್ಸೆಪ್ಟ್ ಇರುವ ಈ ಚಿತ್ರಕ್ಕೆ ಚಿತ್ರದಲ್ಲಿ ಕೃಷ್ಣನ ಪಾತ್ರ ಹಾಗೂ ಅರ್ಜುನನನ್ನು ಹೋಲುವ ಪಾತ್ರಗಳೂ ಇವೆ. ಮಂಡ್ಯ, ಚನ್ನಪಟ್ಟಣ, ರಾಮನಗರ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ ಎನ್ನುತ್ತಾರೆ.
ಹಳ್ಳಿಯ ಹುಡುಗರು ವಿದ್ಯಾವಂತರಾದ ಮೇಲೆ, ಕೆಲಸದ ನಿಮಿತ್ತ ಪಟ್ಟಣಕ್ಕೆ ಅಂತ ಹೋದವರು ಅಲ್ಲೇ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು ? ನಮ್ಮ ಹಳ್ಳಿಗಳು ಉಳಿಯುವುದಾದರೂ ಹೇಗೆ ?, ಹಾಗಾಗಿ ಯುವಕರು ಹಳ್ಳಿಯಲ್ಲೇ ನೆಲೆಸಬೇಕು, ಹಳ್ಳಿಗಳನ್ನು ಬೆಳೆಸಬೇಕು ಎಂಬ ಕಥಾಹಂದರದ ಮೇಲೆ ಈ ಚಿತ್ರ ಮಾಡಿದ್ದೇವೆ. ಜೂನ್ 21ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ. ಕಮರ್ಷಿಯಲ್ ಚಿತ್ರವಾದರೂ, ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವಂಥ ಹಲವಾರು ಅಂಶಗಳು ನಮ್ಮ ಚಿತ್ರದಲ್ಲಿವೆ ಎಂದು ಹೇಳಿದರು.
ಈ ಹಿಂದೆ 1975 ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ಕೃಷಿ ಮತ್ತು ರೈತರ ಮೇಲೆ ಮಾಡಿದ ಚಿತ್ರವಿದು, ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್ ಎನ್ನುವುದು ನಾಯಕ ಜಯ್ಶೆಟ್ಟಿ ಮಾತು. ಬಿಜಾಪುರ ಮೂಲದ ನಿಶಾ ರಜಪೂತ್ ಈ ಚಿತ್ರದ ನಾಯಕಿ.ಉಳಿದಂತೆ ಕಲಾವಿದರಾದ ಬಲ ರಾಜವಾಡಿ, ಪುನೀತ್, ಅಶ್ವಿನ್ಹಾಸನ್ ಇದ್ದಾರೆ.