ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಯಾವುದೇ ವ್ಯಕ್ತಿಗಳಿಗೆ ಒಬ್ಬ ಚುನಾಯಿತ ಪ್ರತಿನಿಧಿಗಿಂತ ದೊಡ್ಡಸ್ಥಾನ ಬೇಕಾಗಿಲ್ಲ. ಸಂಸತ್ ಸದಸ್ಯನನ್ನಾಗಿ ಕ್ಷೇತ್ರದ ಜನರು ನಾಲ್ಕನೇ ಬಾರಿಗೆ ಆಶೀರ್ವಾದ ಮಾಡಿದ್ದಾರೆ. ನನಗೆ ಸಂತೃಪ್ತಿ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಎನ್ ಡಿಎ ಮೈತ್ರಿಕೂಟದ ನೂತನ ಸಚಿವರುಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರು ಸೋಮವಾರ ದೆಹಲಿಯಿಂದ ನೇರವಾಗಿ ಹುಬ್ಬಳಿಗೆ ಬಂದು, ಅಲ್ಲಿಂದ ತಾಲೂಕಿನ ಜಡೆ ಮಠಕ್ಕೆ ಭೇಟಿ ಕೊಟ್ಟಿದ್ದ ವೇಳೆ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಮಂತ್ರಿ ಸ್ಥಾನ ಸಿಕ್ಕಿಲ್ಲ ಎನ್ನುವುದಕ್ಕೆ ನನಗೆ ಯಾವುದೇ ಬೇಸರ ಇಲ್ಲ. ಈಗಿನ ಪರಿಸ್ಥಿತಿ ಏನು ಎನ್ನುವುದು ನನಗೆ ಅರಿವಿದೆ. ಬಹು ಮುಖ್ಯವಾಗಿ ನನಗೆ ಸಚಿವ ಸ್ಥಾನ ಮುಖ್ಯವಲ್ಲ, ಕ್ಷೇತ್ರದಲ್ಲಿನ ಅನೇಕ ಜ್ವಲಂತ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕಿದೆ. ವಿಶೇಷವಾಗಿ ಶರಾವತಿ ಮುಳುಗಡೆ, ಬಗರ್ ಹುಕುಂ, ಮೊಬೈಲ್ ಟವರ್ ಅನೇಕ ಮಲೆನಾಡು ಭಾಗದಲ್ಲಿನ ಸಮಸ್ಯೆಗಳಿಗೆ ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ ಕೊಟ್ಟು ಗಮನಹರಿಸುತ್ತೇನೆ ಎಂದು ವಿಶ್ವಾಸ ನೀಡಿದರು.
ನೀವು ನಾಲ್ಕು ಬಾರಿ ಆಯ್ಕೆಯಾಗಿದ್ದೀರಿ, ಸೋಮಣ್ಣ ಒಂದು ಬಾರಿ ಆಯ್ಕೆ ಆಗಿ ಸಚಿವ ಸ್ಥಾನ ಪಡೆದಿದ್ದಾರೆ. ಇದು ಕ್ಷೇತ್ರದ ಕಾರ್ಯಕರ್ತರಲ್ಲಿ ಒಂದಷ್ಟು ಗೊಂದಲ ಹುಟ್ಟಿಸಿದೆಯಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸೋಮಣ್ಣ ತುಂಬ ಹಿರಿಯ ಮುಖಂಡರು. ಅವರು ಕಾರ್ಪೋರೇಟರ್ ಆಗಿ, ಮಂತ್ರಿಗಳಾಗಿ ಅನೇಕ ಕೆಲಸ ಮಾಡಿದ್ದಾರೆ. ಅವರು ಆಯ್ಕೆಯಾಗಿರುವುದು ಸಂತೋಷ ತಂದಿದೆ. ನಿರೀಕ್ಷೆ ಇರಲಿಲ್ಲ. ನಿರೀಕ್ಷೆ ಇಟ್ಟುಕೊಂಡಾಗ ಮಾತ್ರ ಹುಸಿಯಾಗುತ್ತದೆ. ಅಭಿಮಾನಿಗಳಿಗೆ ಹೇಳಲು ಇಚ್ಛಿಸುವುದೇಂದರೆ ಯಾವುದೇ ಕೊರತೆ ಇಲ್ಲದೇ ಸಹಕಾರವನ್ನು ಮತದಾರರಿಗೆ ಕೊಡುತ್ತೇನೆ. ಪ್ರೀತಿ ಕೊಟ್ಟಿದ್ದೀರಿ ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.