Sunday, December 22, 2024
Google search engine
Homeಮನರಂಜನೆಕನ್ನಡಕ್ಕೊಬ್ಬ ಬಾಲಿವುಡ್‌ ಹೀರೋ !

ಕನ್ನಡಕ್ಕೊಬ್ಬ ಬಾಲಿವುಡ್‌ ಹೀರೋ !

ಹೆಸರು ಸಮರ್ಜಿತ್ ಲಂಕೇಶ್. ಹೆಸರೇ ಹೇಳುವ ಹಾಗೆ ಇದು ಸಾಹಿತಿ, ಪತ್ರಕರ್ತ, ಸಿನಿಮಾ ನಿರ್ದೇಶಕ ಪಿ. ಲಂಕೇಶ್ ಕುಟುಂಬದ ಕುಡಿ. ಸ್ಟಾರ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಸುಪುತ್ರ. ಹೆಚ್ಚು ಕಡಿಮೆ ೨೫ ರ ಅಸುಪಾಸಿನ ತರುಣ. ಚಿಗುರು ಮೀಸೆಯ ಹುಡುಗ. ಎಳೆಯ ವಯಸ್ಸಿನಲ್ಲಿಯೇ ಜಿಮ್‌ ಗೆ ಹೋಗಿ ಬಾಡಿ ದಂಡಿಸಿ, ಮೈಕಟ್ಟು ಹುರಿಗೊಳಿಸಿಕೊಂಡಿರುವ ಸಮರ್ಜಿತ್‌, ಒಂದು ಆಂಗಲ್‌ ನಲ್ಲಿ ಬಾಲಿವುಟ್‌ ನಟ ಟೈಗರ್‌ ಶ್ರಾಫ್‌ ಲುಕ್‌ ನಲ್ಲಿ ಕಾಣುತ್ತಾರೆ. ಕನ್ನಡದ ಟೈಗರ್‌ ಶ್ರಾಫ್‌, ಕನ್ನಡದ ಹೃತಿಕ್‌ ರೋಷನ್ ಎನ್ನುವ ಮಾತು ಪತ್ರಕರ್ತರಿಂದಲೇ ಅವರಿಗೆ ಸಿಕ್ಕಿದೆ. ಸಿನಿಮಾದೊಂದಿಗಿನ ತಮ್ಮ ಕುಟುಂಬದ ನಂಟಿನ ಅಂಟಿನೊಂದಿಗೆ ಈಗ ಹೀರೋ ಆಗಿ ಬೆಳ್ಳಿ ತೆರೆಗೆ ಎಂಟ್ರಿಯಾಗುತ್ತಿದ್ದಾರೆ. ಆ ಮೂಲಕ ಲಂಕೇಶ್ ಕುಟುಂಬದ ಮೂರನೇ ತಲೆಮಾರು ಈಗ ಬಣ್ಣದ ಲೋಕಕ್ಕೆ ಬರುತ್ತಿರುವುದು ವಿಶೇಷ.

‘ಗೌರಿ’, ಇದು ಸಮರ್ಜಿತ್ ಅಭಿನಯದ ಚೊಚ್ಚಲ ಚಿತ್ರದ ಶೀರ್ಷಿಕೆ ‌. ಆಗಸ್ಟ್ ೧೫ ರ ಸ್ವಾತಂತ್ರ್ಯೋತ್ಸದ ದಿನವೇ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಸಮರ್ಜಿತ್ ಪಾಲಿಗೆ ಇದು ಹಲವು ವಿಶೇಷತೆಗಳನ್ನು ಹೊಂದಿರುವ ಚಿತ್ರ. ಮೊದಲ ಸಿನಿಮಾ ಅಂತಲ್ಲ, ಚಿತ್ರದ ಶೀರ್ಷಿಕೆಯೇ ಈ ಚಿತ್ರದ ಮೊದಲ ವಿಶೇಷ. ಗೌರಿ , ಇದು ಸಮರ್ಜಿತ್ ಲಂಕೇಶ್ ಅವರ ಅತ್ತೆಯ ಹೆಸರು. ಅಂದ್ರೆ ಗೌರಿ ಲಂಕೇಶ್ ಅವರ ಹೆಸರು. ಈ ಹೆಸರಿನ ಚಿತ್ರದ ಮೂಲಕವೇ ಸಮರ್ಜಿತ್ ಕನ್ನಡದ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

ಇನ್ನು ಚಿತ್ರದ ಶೀರ್ಷಿಕೆಗೂ, ಕಥೆಗೂ ಏನಾದರೂ ನಂಟು ಇದೀಯಾ? ಯಾಕೆಂದರೆ ಗೌರಿ ಲಂಕೇಶ್ ಅವರ ಬದುಕಿನ ಹಿನ್ನೆಲೆಯೇ ಒಂದು ಸಿನಿಮಾದ ಕಥೆ. ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಗ್ಲಿಷ್ ಪತ್ರಕರ್ತೆಯಾಗಿದ್ದವರು, ತಂದೆ ಪಿ. ಲಂಕೇಶ್ ಅವರ ನಿಧನದ ನಂತರ ಬೆಂಗಳೂರಿಗೆ ವಾಪಾಸ್‌ ಆಗಿ, ʼಗೌರಿ ಲಂಕೇಶ್ʼ ಹೆಸರಲ್ಲಿ ಪತ್ರಿಕೆ ಹೊರ ತಂದಿದ್ದು, ಆ ಮೂಲಕವೇ ನಾಡಿನ ಎಡಪಂಥೀಯ ಚಳವಳಿಗಳಲ್ಲಿ ಗುರುತಿಸಿಕೊಂಡು ಕೋಮುವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಕೊನೆಗೆ ಅದೇ ಗ್ಯಾಂಗ್ ನಿಂದ ಹತ್ಯೆ ಯಾಗಿದ್ದೆಲ್ಲ ಈಗ ಇತಿಹಾಸವೇ ಆಗಿದ್ದರೂ, ಆ ಕಾರಣಕ್ಕಾಗಿಯೇ ಇವತ್ತು ಗೌರಿ ಲಂಕೇಶ್ ಹೆಸರು ಕನ್ನಡಿಗರ ಮನೆ ಮಾತು. ಹಾಗಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರುʼ ಗೌರಿʼ ಎನ್ನುವ ಚಿತ್ರದ ಮೂಲಕವೇ ತಮ್ಮ ಪುತ್ರನನ್ನು ಬೆಳ್ಳಿತರೆಗೆ ಪರಿಚಯಿಸುತ್ತಿದ್ದಾರೆಂದಾಗ, ಅಲ್ಲೇನೋ ವಿಶೇಷತೆ ಇದ್ದೇ ಇರುತ್ತದೆ ಎಂದು ಕೊಳ್ಳುವುದು ಸಹಜವೇ ಹೌದು.ಆದರೆ ಇಂದ್ರಜಿತ್ ಲಂಕೇಶ್ ಪ್ರಕಾರ , ಗೌದಿ ಲಂಕೇಶ್ ಅವದ ಬುದುಕಿಗೂ ಈ ಚಿತ್ರದ ಕಥೆಗೂ ನೋ ಕನೆಕ್ಷನ್ ‌.

‘ ಗೌರಿ ಲಂಕೇಶ್ ಆವರ ಬದುಕಿಗೂ, ಈ ಚಿತ್ರಕ್ಕೂ ಯಾವುದೇ ಕನೆಕ್ಷನ್ ಇಲ್ಲ. ಗೌರಿ ಎನ್ನುವುದು ಒಂದು ಶೀರ್ಷಿಕೆ ಮಾತ್ರ. ಅದು ಸಹೋದರಿ ಗೌರಿ ಲಂಕೇಶ್ ಅವರ ಮೇಲಿನ ಅಭಿಮಾನಕ್ಕಿಟ್ಟರೂ, ನಾಡಿನ ಉದ್ದಗಲಕ್ಕೂ ಇರುವ ಗೌರಿ ಎನ್ನುವವರ ಕಥೆಗೂ ಇದಾಗಿರಬಹುದುʼ ಎನ್ಜುತ್ತಾರೆ ಇಂದ್ರಜಿತ್ ಲಂಕೇಶ್. ಅವರು ಎನೇ ಹೇಳಿದರೂ ಅವರ ʼಗೌರಿʼ ಸಿನಿಮಾ ಗೌರಿ ಲ‌ಂಕೇಶ್ ನೆನಪಿನ ಸಿನಿಮಾವೇ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಹಾಗೊಂದು ವೈಶಿಷ್ಟ್ಯ ತೆಯ ಹೆಸರಿನ ಮೂಲಕ ಸಮರ್ಜಿತ್ ಬೆಳ್ಳಿತೆರೆಗೆ ಬರುತ್ತಿರುವುದು ಅವರ ಅದೃಷ್ಟವೇ ಹೌದು.

ನಿಜ, ಸಮರ್ಜಿತ್ ಹಲವು ಕೋನಗಳಲ್ಲಿ ಅದೃಷ್ಟವಂತ. ಹೆಸರಾಂತ ಪತ್ರಕರ್ತ ಪಿ. ಲಂಕೇಶ್‌ ಕುಟುಂಬದಲ್ಲಿ ಹುಟ್ಟಿದ್ದು ಒಂದು ಕಾರಣವಾದರೆ, ಅಪ್ಪನೇ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ ಸಿನಿಮಾದ ಮೂಲಕವೇ ಬೆಳ್ಳಿ ತೆರೆಗೆ ಹೀರೋ ಆಗಿ ಬರುತ್ತಿರುವುದು ಕೂಡ ಇನ್ನೊಂದು ವಿಶೇಷ. ಎಷ್ಟು ಜನ ಹೊಸ ಪತ್ರಿಭೆಗಳಿಗೆ ಸಿನಿ ದುನಿಯಾದಲ್ಲಿ ಇಂತಹ ಅವಕಾಶ ಸಿಕ್ಕಿತ್ತೋ ಅಥವಾ ಸಿಗುತ್ತದೆಯೋ ಗೊತ್ತಿಲ್ಲ, ಆದರೆ ಅದು ಸಮರ್ಜಿತ್ ಪಾಲಿಗೆ ಸಿಕ್ಕಿದೆ. ಅಂದ್ರೆ, ಮಗನನ್ನು ಹೀರೋ ಆಗಿ ಪರಿಚಯಿಸ ಬೇಕೆನ್ನುವ ಹಂಬಲದಲ್ಲಿ ಇಂದ್ರಜಿತ್ ಲಂಕೆಶ್ ಅವರೇ ನಿರ್ಮಿಸಿ, ನಿರ್ದೇಶನ ಮಾಡಿರುವ ಚಿತ್ರವಿದು. ಹೋಂ ಬ್ಯಾನರ್ ಜತೆಗೆ ಅಪ್ಪನ ನಿರ್ದೇಶನದ ಮೂಲಕವೇ ನಟನಾಗಿ ಪರಿಚಯವಾಗುವ ಅವಕಾಶ ಸಮರ್ಜಿತ್ ಅವರಿಗೆ ಸಿಕ್ಕಿದೆ.

ಇನ್ನು ಇಂದ್ರಜಿತ್‌ ಲಂಕೇಶ್‌ ನಿರ್ದೇಶನ ಹಾಗೂ ನಿರ್ಮಾಣದ ಸಿನಿಮಾ ಅಂದ್ಮೇಲೆ ಆ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಅದ್ದೂರಿ ನಿರ್ಮಾಣದ ಜತೆಗೆ ಸಿನಿಮಾ ಎಲ್ಲಾ ಬಗೆಯಲ್ಲೂ ಕಲರ್‌ ಫುಲ್‌ ಆಗಿರುತ್ತದೆ ಎನ್ನುವುದಕ್ಕೆ ಅವರ ನಿರ್ದೇಶನದ ಹಿಂದಿನ ಸಿನಿಮಾಗಳೇ ಸಾಕ್ಷಿ. ʼಗೌರಿʼ ಕೂಡ ಅದರಿಂದ ಹೊರತಾಗೇನು ಇಲ್ಲ. ಈಗಾಗಲೇ ಈ ಚಿತ್ರದ ಪೋಸ್ಟರ್‌, ಟ್ರೇಲರ್‌, ಹಾಡುಗಳ ಲಿರಿಕಲ್‌ ವಿಡಿಯೋ ನೋಡಿದವರಿಗೆ ಇದರ ಅನುಭವ ಇದ್ದೇ ಇದೆ. ಹಲವು ಬಗೆಯಲ್ಲೂ ಗೌರಿ ಸಿನಿಮಾ ಭರ್ಜರಿ ಆಗಿಯೇ ಮೂಡಿಬಂದಿದೆ. ಮೊನ್ನೆಯಷ್ಟೇ ಇದರ ಟ್ರೇಲರ್‌ ಲಾಂಚ್‌ ಮಾಡಿದ ನಟ ಕಿಚ್ಚ ಸುದೀಪ್‌ ಕೂಡ ಟ್ರೇಲರ್‌ ಮೆಚ್ಚಿ ಮಾತನಾಡಿದ್ದು, ಈ ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ.

ವಿಶೇಷ ಅಂದ್ರೆ ಕಿಚ್ಚ ಸುದೀಪ್‌ ಅವರಿಗೂ ಹೊಸ ಪ್ರತಿಭೆ ಸಮರ್ಜಿತ್‌ ಲಂಕೇಶ್ ಅವರ ನಟನೆಯ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅವತ್ತು ಇಬ್ಬರು ಒಟ್ಟಿಗೆ ಕುಳಿತು ಟ್ರೇಲರ್‌ ವೀಕ್ಷಣೆ ಮಾಡುವಾಗ, ಪ್ರತಿ ಸೀನ್‌ ನಲ್ಲೂ ಸಮರ್ಜಿತ್‌ ಅವರ ಅಂಗಿಕ ಅಭಿನಯ, ಡಾನ್ಸ್‌ ಕಂಡು ಪಕ್ಕದಲ್ಲಿದ್ದ ಸಮರ್ಜಿತ್‌ ಅವರ ಬೆನ್ನು ತಟ್ಟುತ್ತಿದ್ದರು ನಟ ಸುದೀಪ್.‌ ಒಬ್ಬ ಹೊಸ ಪ್ರತಿಭೆಗೆ ಬೆಂಬಲಿಸುವುದು, ಪ್ರೋತ್ಸಾಹಿಸುವುದು ಸಹಜವೆ, ಆದರೆ ಅವರ ನಟನೆಯ ಕೌಶಲ್ಯವನ್ನು ಒರೆಗೆಲ್ಲಿಗೆ ಹಚ್ಚಿ ತಿದ್ದಿ ತೀಡುವುದು ಹಿರಿಯರ ಕೆಲಸ. ಆ ನಿಟ್ಟಿನಲ್ಲಿಯೇ ನಟ ಸುದೀಪ್‌ ಅವರು ಅವತ್ತು ಟ್ರೇಲರ್‌ ನಲ್ಲಿ ಕಾಣಿಸಿಕೊಂಡ ಚಿತ್ರದ ಕೆಲವು ತುಣುಕುಗಳ ಮೂಲಕವೇ ಸಮರ್ಜಿತ್‌ ಗೆ ಮೆಚ್ಚುಗೆ ಹೇಳಿದ್ದು, ಅಲ್ಲೇನೋ ವಿಶೇಷತೆ ಇದೆ ಎನ್ನುವುದಕ್ಕಾಗಿಯೇ ಅಂತಲೇ ಹೌದು.

ಇದರಲ್ಲಿ ಅನುಮಾನವೇ ಬೇಡ. ದೊಡ್ಡ ಮಟ್ಟದ ಬಂಡವಾಳ ಹೂಡಿ ಸಿನಿಮಾ ಮಾಡುವಾಗ ನಿರ್ಮಾಪಕ ಅದನ್ನು ವಾಪಾಸ್‌ ಪಡೆಯುವುದು ಹೇಗೆ ಅಂತಲೂ ಯೋಚಿಸುತ್ತಾನೆ. ಮಗನನ್ನು ಹೀರೋ ಆಗಿ ಮಾಡಬೇಕು, ಆತನನ್ನು ಬೆಳ್ಳಿತೆರೆಗೆ ಪರಿಚಯಿಸಬೇಕು ಅಂತೆನ್ನುವ ಹಂಬಲದಲ್ಲಿ ಕೋಟ್ಯಂತರ ರೂಪಾಯಿ ಹಾಕಿ ಸಿನಿಮಾ ಮಾಡುವಾಗ, ಆ ಸಿನಿಮಾದ ಮಾರುಕಟ್ಟೆಯ ಬಗ್ಗೆಯೂ ಇಂದ್ರಜಿತ್‌ ಲಂಕೇಶ್‌ ಯೋಚಿಸಿಲ್ಲ ಅಂತಲ್ಲ, ಮಗ ಹೀರೋ ಆಗಬೇಕು ಎನ್ನುವ ಆಲೋಚನೆಯ ಜತೆಗೆ ಸಿನಿಮಾಕ್ಕೆ ಹಾಕಿದ ಬಂಡವಾಳವೂ ಬರಬೇಕೆನ್ನುವ ಲೆಕ್ಕಚಾರದಲ್ಲಿಯೇ ಗೌರಿ ಸಿನಿಮಾವನ್ನು ಒಂದು ಪಕ್ಕಾ ಕಮರ್ಷಿಯಲ್‌ ಸಿನಿಮಾವಾಗಿ ತೆರೆಗೆ ತಂದಿದ್ದಾಗಿ ಹೇಳುತ್ತಾರೆ. ಆ ನಿಟ್ಟಿನಲ್ಲಿ ಅವರು ಪುತ್ರನನ್ನು ಒಬ್ಬ ನಟನಾಗಿಸುವುದಕ್ಕೆ ಏನೆಲ್ಲ ತಯಾರಿ ನಡೆಸಿರಬಹುದು?

ಅಪ್ಪ ನಿರ್ದೇಶಕ, ಜತೆಗೆ ನಿರ್ಮಾಪಕರೂ ಕೂಡ ಹೌದು. ಹಾಗಾಗಿಯೇ ತಾನು ಹೀರೋ ಆಗಿ ಬಿಡಬೇಕು ಎನ್ನುವ ಹುಚ್ಚಿನಲ್ಲಿ ಸಮರ್ಜಿತ್‌ ಲಂಕೇಶ್‌ ಸಿನಿ ದುನಿಯಾಕ್ಕೆ ಬಂದವರಲ್ಲ. ಹಾಗೆ ಹೀರೋ ಆಗಿ ಅವರು ಕ್ಯಾಮೆರಾ ಎದುರಿಸುವ ಮುನ್ನ ನಟನೆಯ ಒಂದಷ್ಟು ತರಬೇತಿ ಪಡೆದುಕೊಂಡಿದ್ದಾರೆ. ಅವರು ಕೊಡುವ ಮಾಹಿತಿ ಪ್ರಕಾರ ನ್ಯೂಯಾರ್ಕ್‌ ನಲ್ಲಿ ಅವರು ಆಕ್ಟಿಂಗ್‌ ಟ್ರೇನಿಂಗ್‌ ಮಾಡಿಕೊಂಡು ಬಂದಿದ್ದಾರೆ. ಹಾಗೆಯೇ ಚೆನ್ನೈನಲ್ಲಿ ಸ್ಟಂಟ್‌, ಡಾನ್ಸ್‌ ಟ್ರೇನಿಂಗ್‌ ಆಗಿದೆಯಂತೆ. ಅಷ್ಟು ಮಾತ್ರವಲ್ಲ, ಸಮರ್ಜಿತ್‌ ಲಂಕೇಶ್‌ ಅವರ ಹೈಟು, ವ್ಹೆಟು, ಲುಕ್‌ ಎಲ್ಲವೂ ಅಚ್ಚುಕಟ್ಟಾಗಿವೆ. ಜಿಮ್‌ ಗೆ ಹೋಗಿ ಬಾಡಿ ದಂಡಿಸಿ, ಮೈಕಟ್ಟು ಹುರಿಗೊಳಿಸಿಕೊಂಡಿರುವ ಸಮರ್ಜಿತ್‌ , ಒಳ್ಳೆಯ ಡ್ಯಾನ್ಸರ್‌ ಕೂಡ. ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಬಂದಿರುವ ಗೌರಿ ಚಿತ್ರದ ಹಾಡುಗಳ ಲಿರಿಕಲ್‌ ವಿಡಿಯೋ ನೋಡಿದವರಿಗೆ ಸಮರ್ಜಿತ್‌ ಡಾನ್ಸ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಒಟ್ಟಿನಲ್ಲಿ ಒಬ್ಬ ನಟನಾಗುವುದಕ್ಕೆ ಪೂರ್ವಭಾವಿ ತಯಾರಿ ಏನೆಲ್ಲ ಅಗತ್ಯವೋ ಅದಷ್ಟನ್ನು ಎರಡ್ಮೂರು ವರ್ಷಗಳಿಂದ ಕಲಿತುಕೊಂಡು ಬಂದ ಮೇಲೆಯೇ ಸಮರ್ಜಿತ್‌ ಲಂಕೇಶ್‌ ಕ್ಯಾಮೆರಾ ಮುಂದೆ ನಿಂತಿದ್ದು. ಹಾಗಾಗಿ ʼಗೌರಿʼ ಚಿತ್ರ ಕನ್ನಡಕ್ಕೊಬ್ಬ ಭರವಸೆಯ ನಟನನ್ನು ಪರಿಚಯಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನು ಬಾಕಿ ಉಳಿದ ಕುತೂಹಲ ʼಗೌರಿ ʼ ಚಿತ್ರದ ಶೀರ್ಷಿಕೆ ಹಾಗೆಯೇ ಕಥೆಯ ಬಗ್ಗೆ. ಸದ್ಯಕ್ಕದು ಸಸ್ಪೆನ್ಸ್.‌ ಚಿತ್ರ ತೆರೆ ಕಂಡಾಗಲೇ. ಈ ಕ್ಷಣದ ಕುತೂಹಲ, ಕಾತರ ಆಗಸ್ಟ್‌ ೧೫ ರತ್ತಲೇ ಇದೆ. ಆದಿನಕ್ಕೆ ಕಾಯಬೇಕಿದೆ.‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments