ಗೀತಾ ಶಿವರಾಜಕುಮಾರ ಅವರ ಸೋಲಿನ ಹೊಣೆ ನನ್ನದು. ಆದರೆ, ಇಲ್ಲಿ ಗೀತಕ್ಕ ೫.೩೦ ಲಕ್ಷ ಮತ ಪಡೆದು ಕ್ಷೇತ್ರದ ಜನರ ಹೃದಯ ಗೆದ್ದಿದ್ದಾರೆ. ಇದು ಖಂಡಿತ ಸೋಲಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶಿವಮೊಗ್ಗ ನಗರದ ಆರ್ಯ ಈಡಿಗ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ‘ಕೃತಜ್ಞತಾ ಸಭೆ’ಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಆಯ್ಕೆಗೆ ಬೆಲೆ ಕೊಡಬೇಕು. ಅವರ ಅಭಿಪ್ರಾಯವನ್ನು ಗೌರವಿಸಬೇಕು. ಆದ್ದರಿಂದ, ಈ ಸೋಲು ಮುಂದಿನ ಬದಲಾವಣೆಗೆ ಸ್ಪೂರ್ತಿ ಆಗಲಿದೆ. ಮತ ನೀಡಿ ಹರಸಿದ ಎಲ್ಲಾ ಮತದಾರರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಅವರು, ಕೇಂದ್ರದಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ, ಆಂತರಿಕವಾಗಿ ಸೋತಿದೆ ಎಂದರು.
ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಚುನಾವಣೆ ಪೂರ್ವ ಕ್ಷೇತ್ರದ ಎಲ್ಲಾ ಭಾಗದಲ್ಲಿ ಸಂಚರಿಸಿ, ಜನರಿಗೆ ಹತ್ತಿರ ಆಗಿದ್ದೇವೆ. ಇದು ದಣಿವಲ್ಲ. ಕ್ಷೇತ್ರದ ಜನರನ್ನು ಸಂಪರ್ಕಿಸಲು ಸಿಕ್ಕ ಅವಕಾಶ. ಇದರಿಂದ ಜನ ೫.೩೦ ಲಕ್ಷಗಳ ಮತ ನೀಡಿ, ಆಶೀರ್ವದಿಸಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲಾ ಮತದಾರರು ಹಾಗೂ ಕಾರ್ಯಕಕೂತರಿಗೆ ಧನ್ಯವಾದ ಹಾಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ , ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್,ಎಸ್.ರವಿಕುಮಾರ್, ಬಲ್ಕೀಸ್ ಭಾನು, ಆರ್.ಎಂ.ಮಂಜುನಾಥ ಗೌಡ, ಎಚ್.ಸಿ.ಯೋಗೀಶ್, ನಾಗರಾಜ್ ಗೌಡ, ಎಂ.ಶ್ರೀಕಾಂತ್, ಬಿ.ಕೆ.ಮೋಹನ್, ಜಿ.ಪಲ್ಲವಿ, ಎನ್.ರಮೇಶ್,ಜಿ.ಡಿ.ಮಂಜುನಾಥ, ಎಸ್.ಕೆ.ಮರಿಯಪ್ಪ, ಚಂದ್ರಭೂಪಾಲ್, ಅನಿತಾ ಕುಮಾರಿ, ಮುಡುಬ ರಾಘವೇಂದ್ರ ಸೇರಿ ಕಾರ್ಯಕರ್ತರು ಇದ್ದರು.