ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಶಿವಮೊಗ್ಗದಿಂದಲೇ ಪಕ್ಷದ ಪ್ರಥಮ ಚುನಾವಣಾ ಪ್ರಚಾರ ಆರಂಭಿಸಿದರು.
ನಗರದ ಅಲ್ಲಮ ಪ್ರಭು ಮೈದಾನದಲ್ಲಿ ಸೇರಿದ್ದ ಭಾರೀ ಜನಸ್ತೋಮದ ನಡುವೆ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಮೂಲಕವೇ ಚುನಾವಣಾ ಪ್ರಚಾರ ಭಾಷಣಕ್ಕೆ ನಾಂದಿ ಹಾಡಿದರು.
ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದ ಬೆನ್ನಲ್ಲೇ ಕಲ್ಬುರ್ಗಿಯಲ್ಲಿ ಬೃಹತ್ ಸಮಾವೇಶ ನಡೆಸಿದ ಪ್ರಧಾನಿ ಇಂದು ಶಿವಮೊಗ್ಗದಲ್ಲೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಂಡರು. ಪ್ರಧಾನಿ ಪ್ರಚಾರದ ಮೊದಲ ಸಾರ್ವಜನಿಕ ಸಭೆ ಆಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈ ಸಮಾವೇಶವನ್ನು ಪ್ರತಿಷ್ಠೆಯಾಗಿಯೇ ತೆಗೆದುಕೊಂಡಿದ್ದರು.
ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಸೇರಿ ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಗುರಿಯಾಗಿಸಿ ಈ ಸಮಾವೇಶ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಅಷ್ಟು ಜಿಲ್ಲೆಗಳಿಂದ ಬಸ್ಸುಗಳ ಮೈಲಕ ಭಾರೀ ಜನಸ್ತೋಮವೇ ಹರಿದು ಬಂದಿತ್ತು. ಸಮಾವೇಶಕ್ಕೆ ಬಂದ ಜನ ಸಂಖ್ಯೆ ಕುರಿತು ಬಿಜೆಪಿ ನಾಯಕರು ೨ ಲಕ್ಷದ ಲೆಕ್ಕ ಕೊಟ್ಟರಾದರೂ, ಒಂದು ಲಕ್ಷದಷ್ಟು ಜನ ಸೇರಿದ್ದು ಕಂಡು ಬಂತು.
ಮೋದಿ ಆಗಮನಕ್ಕೂ ಮುನ್ನ ಮಾತನಾಡಿದ ಸಂಸದ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ಬಿ.ವೈ. ರಾಘವೇಂದ್ರ ಅವರು, ಇದೊಂದು ಐತಿಹಾಸಿಕ ಸಮಾವೇಶವೇ ಆಗಿದೆ. ಪ್ರಧಾನಿ ಮೋದಿ ಅವರನ್ನು ನೋಡಲು ೨ ಲಕ್ಷಕ್ಕೂ ಹೆಚ್ಚು ಜನರು ಬರಲಿದ್ದಾರೆಂದು ಹೇಳಿದ್ದರು.
ಅಷ್ಟು ಮಾತ್ರವೇ ಅಲ್ಲದೆ, ನರೇಂದ್ರ ಮೋದಿ ಭೇಟಿಯಿಂದ ತಮಗೆ ಮತ್ತಷ್ಟು ಬಲ ಬಂದಿದೆ. ಜಿಲ್ಲೆಯಿಂದ ಚುನಾವಣಾ ಪ್ರಚಾರ ಆರಂಭವಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಲ್ಲ ೨೮ ಕ್ಷೇತ್ರಗಳಲ್ಲೂ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ಸುತ್ತಮುತ್ತಲ ರಸ್ತೆಗಳಲ್ಲಿ ಭಾರೀ ಬಿಗಿಬಂದೋಬಸ್ತ್ ಮಾಡಲಾಗಿತ್ತು. ಮೈದಾನದ ಎರಡು ಗೇಟ್‌ಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.
ರಸ್ತೆಯ ಎರಡು ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ಶಾಲಾ, ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ತೆರಳಲು ಅವಕಾಶ ಮಾಡಿಕೊಡಲಾಗಿದ್ದು, ೧೧ ಗಂಟೆ ಬಳಿಕ ೧೦ ಕಿಮೀ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು.