ಆಯನೂರು ಅವರು ಸದನದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಸರ್ಜಿಯವರು ಯಡಿಯೂರಪ್ಪನವರ ಕುಟುಂಬದವರು. ಇವರನ್ನು ಸೋಲಿಸಿ ಎಂದು ಈಶ್ವರಪ್ಪನವರೇ ಕರೆ ಕೊಡುತ್ತಿದ್ದಾರೆ. ಇವೆಲ್ಲಾ ಬೆಳವಣಿಗೆಗಳು ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸುಲಭವಾಗಿ ಜಯಗಳಿಸಲು ಕಾಣವಾಗಲಿವೆ ಎಂದು ನೈರುತ್ಯ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಎಂ. ರಮೇಶ್ ಶಂಕರಘಟ್ಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ಶಿವಮೊಗ್ಗದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಕೊಡಗು ಹೊರತುಪಡಿಸಿ ಎಲ್ಲ ಕಡೆ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆ ಬೆಂಬಲವಿದೆ. ೪೦ ವರ್ಷಗಳ ಇತಿಹಾಸದಲ್ಲೇ ನಮ್ಮ ಪಕ್ಷವು ಈ ಕ್ಷೇತ್ರದ ಗೆಲುವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಭೂತ್ ನಮ್ಮ ಜವಾಬ್ದಾರಿ ಎಂಬ ಚುನಾವಣಾ ಪ್ರಚಾರ ತಂತ್ರದಂತೆ ಮತದಾರರನ್ನು ಮನೆ ಮನೆ ಭೇಟಿ ಮಾಡಿದ್ದೇವೆ. ಈ ಭಾಗದ ೧೪ ಶಾಸಕರು ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿರುವುದರಿಂದ ಜಯ ನಿಶ್ಚಿತ ಎಂದರು
ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಲ್ಲಿ ೧೪ ಕಾಂಗ್ರೆಸ್ ಶಾಸಕರುಗಳು ಇರುವುದರಿಂದ ನಮಗೆ ಬೆಂಬಲ ಹೆಚ್ಚಿದೆ. ಜೊತೆಗೆ ಸೋತ ಅಭ್ಯರ್ಥಿಗಳು ಮತ್ತು ಈ ಕ್ಷೇತ್ರದಲ್ಲಿ ಈ ಹಿಂದೆ ಸ್ಪರ್ಧಿಸಿರುವವರು ಈಗ ನಮ್ಮ ಜೊತೆ ಇದ್ದಾರೆ. ಪ್ರತಿ ಮತದಾರರನ್ನು ಭೇಟಿ ಮಾಡುತ್ತಿದ್ದೇವೆ. ಎಲ್ಲ ಕಡೆ ಉತ್ತಮ ವಾತಾವರಣವಿದೆ ಎಂದರು.
ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬೋಜೇಗೌಡರು, ಗೆದ್ದ ಮೇಲೆ ಏನನ್ನು ಮಾಡಲಿಲ್ಲ. ಅವರು ನೀಡಿದ ಭರವಸೆಗಳು ಈಡೇರಲಿಲ್ಲ. ಶಿಕ್ಷಕರು ಭ್ರಮನಿರಸನಗೊಂಡಿದ್ದಾರೆ. ಅಲ್ಲದೇ ಬಿಜೆಪಿಯ ಸಿಟಿ ರವಿ ಸೇರಿದಂತೆ ಹಲವರ ಸೋಲಿಗೆ ಇವರು ಕಾರಣರಾಗಿದ್ದಾರೆ. ಸಿಟಿ ರವಿ ಸೋತಾಗ ಹಾಲಿನ ಅಭಿಷೇಕ ಮಾಡಿಸಿಕೊಂಡಿದ್ದನ್ನು ಬಿಜೆಪಿಯವರು ಹೇಗೆ ಮರೆಯಲು ಸಾಧ್ಯ. ಅವರನ್ನು ಸೋಲಿಸಲು ಅವರ ಪಕ್ಷದವರೇ ಸಾಕು ಎಂದರು.