ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಪ್ರಚಾರಕ್ಕೂ ಮೊದಲು ಈಶ್ವರಪ್ಪ ಕೊಲ್ಲೂರಿಗೆ ತೆರಳಿ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದರು.
ದೇವರ ಕುಂದ, ನೆಂಪು, ಬಗ್ವಾಡಿ ಕ್ರಾಸ್, ಕಂಚಕೋಡು, ನಾಗೂರು, ಉಪ್ಪುಂದ, ಬೈಂದೂರು, ಶಿರೂರು ಗ್ರಾಮಗಳಿಗೆ ತೆರಳಿ ಕಾರ್ಯಕರ್ತ ಸಭೆ ನಡೆಸಿ ಚುನಾವಣಾ ಪೂರ್ವ ಭಾವಿ ಸಭೆ ನಡೆಸಿದರು.
ಗ್ರಾಮಸ್ಥರನ್ನು ಉದ್ದೇಶಿಸಿ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಪ್ಪ ಮಕ್ಕಳ ಹಿಡಿತದಲ್ಲಿದೆ, ಹಿಂದುತ್ವ ಪರ ಧ್ಚನಿ ಎತ್ತುವ ಸಿ.ಟಿ.ರವಿ, ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್ ರನ್ನು ಮೂಲೆ ಗುಂಪು ಮಾಡಲಾಗಿದೆ.
ಕಾರ್ಯಕರ್ತರು ನೊಂದಿದ್ದಾರೆ ತಮ್ಮ ಕಷ್ಟವನ್ನು ಹೇಳಿಕೊಳ್ಳಲಾಗದೆ ಸಂಕಟ ಪಡುತ್ತಿದ್ದಾರೆ ಎಂದರು.
ಅಧಿಕಾರ, ಟಿಕೆಟ್ ಎಲ್ಲವೂ ಒಂದು ಕುಟುಂಬದವರು ಹೇಳಿದಂತೆ ದೊರೆಯುತ್ತಿದೆ. ಇದರ ವಿರುದ್ಧ ಸಿದ್ದಾಂತ ಮತ್ತು ಹಿಂದುತ್ವದ ಆಧಾರದ ಮೇಲೆ ಹೋರಾಟ ಮಾಡುತ್ತಿದ್ದೇನೆ, ಕಾರ್ಯಕರ್ತರ ಪರ ಧ್ವನಿಯಾಗಲು ಪಕ್ಷ ಶುದ್ಧಿಕರಣ ಮಾಡಲು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ ಅನೇಕ ಹಿರಿಯರು, ಕಾಂಗ್ರೆಸ್ ಜೆಡಿಎಸ್ ಪಕ್ಷದವರು ಮತ್ತು ಜನ ಸಾಮಾನ್ಯರು ನಾನು ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿಯದಂತೆ ಹೇಳಿ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.
ಹಾವೇರಿಯಲ್ಲಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಿ ನಾನು ಟಿಕೆಟ್ ಕೊಡಿಸಿ ಗೆಲ್ಲಿಸುತ್ತೇನೆ ಎಂದು ಕಾಂತೇಶ್ ಗೆ ಹೇಳಿ ಮೋಸ ಮಾಡಿದರು. ಪಕ್ಷ ಬಿಟ್ಟು ಹೋಗಿದ್ದ ಜಗದೀಶ್ ಶೆಟ್ಟರ್ ಗೆ ಟಿಕೆಟ್ ಕೊಡಿಸಿದರು ಇದೆನಾ ಹೊಸ ಯಡಿಯೂರಪ್ಪ..?
ಇಂತಹ ಕುತಂತ್ರಕ್ಕೆ ಉತ್ತರ ಕೊಡಲು ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ಎಂದರು.
ಮಾ.12ರಂದು ನಾಮ ಪತ್ರ ಸಲ್ಲಿಸುತ್ತೇನೆ. ನೀವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಶಿವಮೊಗ್ಗಕ್ಕೆ ಆಗಮಿಸಿ ನನಗೆ ಆಶೀರ್ವಾದ ಮಾಡಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ, ಮೋದಿ ಕೈ ಬಲ ಪಡಿಸಲು ಬೆಂಬಲ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೊಗವೀರ ಸಮುದಾಯದ ಮುಖಂಡರಾದ ಲೋಹಿತಾಶ್ವ, ಜಯಂತ್, ಕಟ್ಟೆ ಬೆಲ್ತೂರು ಗ್ರಾಮ ಪಂಚಾಯತಿ ಸದಸ್ಯರಾದ ದಿನೇಶ್ ಕಾಂಚನ್, ಗಣೇಶ್ ಮಲ್ಲಾರಿ, ರಮೇಶ್ ಕಾಂಚನ್. ಮೀನುಗಾರ ಸಮಾಜದ ಗೋಪಾಲ್, ನಾರಾಯಣ.ಕೆ ಕೊಲ್ಲೂರು ದೇವಸ್ಥಾನದ ಮಾಜಿ ಟ್ರಸ್ಟಿ ಗೋಪಾಲ ಕೃಷ್ಣ ನಾಡ.ದೇವಾಡಿಗ ಸಮಾಜದ ದಿನೇಶ್ ದೇವಾಡಿಗ, ರಾಜು, ಸುರೇಶ್ ದೇವಾಡಿಗ. ಉಪ್ರಳ್ಳಿ ಗ್ರಾಮದ ಮೀನುಗಾರ ಸಮಾಜದ ವೆಂಕಟೇಶ್, ವಿನೋದ್ ರಾಜ್, ದಾಮೋದರ್, ಸಂತೋಷ್ ಉಪಸ್ಥಿತರಿದ್ದರು.
———————