ಶಿವಮೊಗ್ಗ ನಗರದಲ್ಲಿ ಮಾ.೧೮ ರಂದು ಬಿಜೆಪಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯ ಸಮಾವೇಶವನ್ನು ʼಅದೊಂದು ರಾಜಕೀಯ ಜಾತ್ರೆ, ಅದರಿಂದ ಶಿವಮೊಗ್ಗ ಜಿಲ್ಲೆಗೆ ನಯಾಪೈಸೆದಷ್ಟು ಲಾಭವಾಗಿಲ್ಲʼ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಜರಿದಿದ್ದಾರೆ.
ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಶಿವಮೊಗ್ಗ ಭೇಟಿ ತಮಗೆ ತುಂಬಾ ನಿರಾಸೆ ತಂದಿದೆ. ಯಾಕೆಂದರೆ ನಮ್ಮ ಜಿಲ್ಲೆಗೆ ಅವರು ಬಂದು ಹೋದರು ಎನ್ನುವುದಷ್ಟೆ ಲಾಭವೇ ಹೊರತು ಬೇರೆನು ಆಗಿಲ್ಲ. ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿದ್ದವು. ಅವುಗಳ ಬಗ್ಗೆ ಮಾತನಾಡದ ಅವರು ಬರೀ ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆ ಮಾಡುವುದಕ್ಕಷ್ಟೇ ತಮ್ಮ ಭಾಷಣವನ್ನು ಮೀಸಲಿರಿಸಿ ಹೋಗಿದ್ದಾರೆ. ಇದು ತಮಗೆ ನಿರಾಸೆ ಎಂದು ಟೀಕಿಸಿದರು.
ಜಿಲ್ಲೆಯ ಪ್ರತಿಷ್ಠಿತ ವಿಐಎಸ್ಎಲ್ ಕಾರ್ಖಾನೆಯ ಸಮಸ್ಯೆ ಇತ್ತು. ಅದು ಕೋರ್ಟ್ ನಲ್ಲಿದೆ. ಅಮಿತ್ ಶಾ ಅವರ ಬರೆದ ಪತ್ರ ತೋರಿಸಿ, ಕಾರ್ಮಿಕರ ಮೂಗಿಗೆ ತಪ್ಪಾ ಹಚ್ಚುವ ಕೆಲಸ ಮಾಡಿದ್ದರು.ಕಾರ್ಖಾನೆ ಆರಂಭದ ಬಗ್ಗೆ ಹಾಲಿ ಸಂಸದರು ಹಿಂದೆಯೂ ಮಾತನಾಡಿದ್ದರು. ಈಗಲೂ ಮಾತನಾಡಿದ್ದಾರೆ. ಸಂತ್ರಸ್ಥರ ನೆರವಿಗೆ ಬರುವುದಾಗಿ ಭರವಸೆ ನೀಡಿದ್ದರು. ಈಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅಧಿಕಾರ ಇದ್ದಾಗ್ಯೂ ಮಾಡದ ಇವರು, ಈಗ ಬೇರೆಯವರ ಮೇಲೆ ಗೂಬೆ ಕೂರಿಸುವ ಮಾತುಗಳನ್ನಾಡಬಾರದು ಎಂದು ಕಿವಿ ಮಾತು ಹೇಳಿದರು.
ಜಿಲ್ಲೆಯ ಬಹು ಸಂಖ್ಯಾತ ರೈತರ ಬೆಳೆ ಅಡಿಕೆ ಬೆಳೆಗಾರರ ನೆರವಿಗಾಗಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ ಈ ಹಿಂದೆ ಅಮಿತ್ ಶಾ ಭರವಸೆ ನೀಡಿದ್ದರು. ಅದು ಹಾಗೆಯೇ ಉಳಿದಿದೆ. ರಾಜ್ಯದಲ್ಲಿ ಭೀಕರ ಬರಗಾಲ ತಾಂಡವಾಡುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಮೇವಿನ ಸಮಸ್ಯೆಯಿದೆ. ಮಲೆನಾಡಿನಲ್ಲೂ ಬರಗಾಲ ಬಂದಿದೆ. ಅಷ್ಟಾಗಿಯೂ ಪ್ರಧಾನಿ ಅವರು ಮಾತನಾಡದೆ ಹೋಗಿದ್ದಾರೆ. ಅವರು ರಾಜ್ಯಕ್ಕೆ ಕೊಡಬೇಕಾದ ತೆರಿಗೆಯ ಪಾಲನ್ನು ಕೊಡುವ ಬಗ್ಗೆ ಮಾತನಾಡಬಹುದಾಗಿತ್ತು. ಯಾವುದನ್ನು ಹೇಳದೆ ಬಂದು ಹೋಗಿದ್ದಾರೆ. ಹಾಗಾಗಿ ಅವರ ಭೇಟಿಯಿಂದ ಜಿಲ್ಲೆಗೆ ಯಾವುದೇ ಲಾಭವಾಗಿಲ್ಲ ಎಂದು ಆಯನೂರು ಮಂಜುನಾಥ್ ಆರೋಪಿಸಿದರು.
ಮೋದಿ ಅವರ ಸಮಾವೇಶ ಕೇವಲ ಅದೊಂದು ರಾಜಕೀಯ ಜಾತ್ರೆ ಮಾತ್ರವೇ. ಅದರಾಚೆ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕಾಗಿ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ನಾರಿಶಕ್ತಿಯ ಬಗ್ಗೆ ಅಮೋಘವಾಗಿಯೇ ಮಾತನಾಡಿದ್ದಾರೆ. ಅದೇ ನಾರಿಶಕ್ತಿಗೆ ಅಪಮಾನವಾಗುವಂತೆ ಅವರದೇ ಪಕ್ಷದ ನಾಯಕ ಈಶ್ವರಪ್ಪ ಅಶ್ಲೀಲದ ಛಾಯೆ ಬರುವಂತೆ ಶೋಭಾ ಕರಂದ್ಲಾಜೆ ಅವರ ಬಗ್ಗೆ ಚಾರಿತ್ರ್ಯ ವಧೆ ಮಾಡುವಂತೆ ಮಾತನಾಡಿದ್ದಾರೆ. ತಮ್ಮದೇ ಸಚಿವ ಸಂಪುಟದ ಸಚಿವೆಯ ಬಗ್ಗೆ ಮಾತನಾಡಿದ್ದರೂ, ಆ ಬಗ್ಗೆ ಚಕಾರವೆತ್ತದ ಪ್ರಧಾನಿ ಮೋದಿ ಅವರು ನಾರಿಶಕ್ತಿಯ ಬಗ್ಗೆ ಮಾತನಾಡಿರುವುದು ಅಪಹಾಸ್ಯದಂತೆ ಕಾಣಿಸಿದೆ ಎಂದು ಆಯನೂರು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಧೀರರಾಜ್ ಹೊನ್ನಾವಿಲೆ, ಆಯನೂರು ಸಂತೋಷ್ ಇದ್ದರು.