ಶಿವಮೊಗ್ಗ: ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಗೆ ಜಿಲ್ಲೆಯಲ್ಲಿ ದಾಖಲೆಯ ಮತದಾನ ಆಗಿದ್ದು, ನೈರುತ್ಯ ಪದವೀಧರ ಕ್ಷೇತ್ರಕ್ಕೆ ಶೇ 80.61 ರಷ್ಟು ಮತದಾನವಾಗಿದ್ದರೆ, ಶಿಕ್ಷಕರ 88.0೪ ರಷ್ಟು ಮತದಾನವಾಗಿದೆ.
ಬೆಳಗ್ಗೆಯಿಂದಲೇ ಮತದಾನ ಬಿರುಸಿನಿಂದ ಸಾಗಿದ್ದು , ಮತದಾನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ. ಇದೇ ವೇಳೆ, ನಗರದ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಮತ ಗಟ್ಟೆಗೆ ಮತ ಚಲಾಯಿಸಲು ಬಂದಿದ್ದ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿದೆ ಎಂದು ಬೇಸರ ಹೊರ ಹಾಕಿದ ಘಟನೆ ನಡೆಯಿತು. ಉಳಿದಂತೆ ಎಲ್ಲಾ ಕಡೆಗಳಲ್ಲೂ ಮತದಾನ ಶಾಂತಿಯುತವಾಗಿ ನಡೆಯಿತು.
ಜಿಲ್ಲೆಯ ವ್ಯಾಪ್ತಿಯಲ್ಲಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಒಟ್ಟು 27412 ಮತದಾರರಿದ್ದು, ಇವರು ಮತ ಚಲಾಯಿಸುವುದಕ್ಕೆ ಜಿಲ್ಲಾಧ್ಯಂತ 38 ಮತಕೇಂದ್ರಗಳನ್ನು ತೆರೆಯಲಾಗಿತ್ತು. ಶಿವಮೊಗ್ಗ ನಗರದಲ್ಲಿಯೇ ೧೧ ಮತ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿತ್ತು. ಇನ್ನು ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ 4365 ಮತದಾರರು ಇದ್ದು, ಇವರು ಮತ ಚಲಾಯಿಸುವುದಕ್ಕೆ ಒಟ್ಟು 32 ಮತಕೇಂದ್ರಗಳನ್ನು ತೆರೆಯಲಾಗಿತ್ತು.
ಮತ ಏಣಿಕೆ ಜು.೬ರಂದು ನಡೆಯಲಿದೆ.ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತಪೆಟ್ಟಿಗೆಗಳನ್ನು ಮತ್ತು ಶಾಸನಬದ್ಧ ಲಕೋಟೆಗಳನ್ನು ಡಿಮಸ್ಟರಿಂಗ್ ಕೇಂದ್ರದಲ್ಲಿ ಕ್ರೋಢೀಕರಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಗೆ ಪೊಲೀಸ್ ಬೆಂಗಾವಲಿನಲ್ಲಿ ತರಲಾಯಿತು. ಮತಪೆಟ್ಟಿಗೆಗಳನ್ನು ಮತ್ತು ಶಾಸನಬದ್ಧ ಲಕೋಟೆಗಳನ್ನು ಪೊಲೀಸ್ ಬೆಂಗಾವಲಿನಲ್ಲಿ ಮೈಸೂರು ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗೆ ರವಾನಿಸಲಾಯಿತು.