ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಗೀತಾ ಶಿವರಾಜ್‌ಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ್ದು, ನನ್ನಿಂದಾಗಲಿ ಅಥವಾ ನಾಯಕರಿಂದಾಗಲಿ ಅಲ್ಲ, ಕಾರ್ಯಕರ್ತರ ವಿಶ್ವಾಸದಿಂದ ಅವರಿಗೆ ಟಿಕೆಟ್ ಸಿಕ್ಕಿದ್ದು, ಹಾಗಾಗಿ ಈ ಬಾರಿ ಗೀತಾ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ ಎಂದು ಸಚಿವ ಎಸ್. ಮDು ಬಂಗಾರಪ್ಪ ಹೇಳಿದರು.
ನಗರದ ಮಿಷನ್ ಕಾಂಪೌಂಡ್ ಚರ್ಚ್ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್‌ನಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಪೂರ್ವ ತಯಾರಿ ಸಭೆ ನಡೆಸಿದ ಅವರು,ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ದ್ದಾಗಿದೆ ಎಂದರು.
ಮಧು ಬಂಗಾರಪ್ಪಗಿಂತ ಗೀತಾ ಉತ್ತಮ ಅಭ್ಯರ್ಥಿ ಎಂದು ಸರ್ವೇ ವರದಿ ಹೇಳಿದೆ. ಗೀತಾ ಅವರನ್ನು ಗೆಲ್ಲಿಸಲು ʼನನ್ನ ಬೂತ್ ನನ್ನ ಜವಾಬ್ದಾರಿʼಯನ್ನು ಪ್ರತಿಯೊಬ್ಬರೂ ಸಮರ್ಥವಾಗಿ ನಿಭಾಯಿಸಬೇಕಿದೆ.ಕಾರ್ಯಕರ್ತರ ವಿಶ್ವಾಸದಿಂದ ಗೀತಾ ವರಿಗೆ ಪಕ್ಷದ ಟಿಕೆಟ್ ಸಿಕ್ಕಿದ್ದು, ಈ ಬಾರಿ ಗೀತಾ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ.
ಬ್ಲಾಕ್ ಉಸ್ತುವಾರಿ ನೇಮಕ ಮಾಡಬೇಕು. ಗ್ರಾಮಗಳಲ್ಲಿ ಬೂತ್ ಕಮಿಟಿ ರಚನೆ ಮಾಡಬೇಕು. ಪ್ರತಿ ಬೂತ್‌ನಲ್ಲಿ ಕನಿಷ್ಠ ೧೦ ಮಹಿಳಾ ಸದಸ್ಯರು, ಕನಿಷ್ಠ ೫ ಸೋಷಿಯಲ್ ಮೀಡಿಯಾ ಕಾರ್ಯಕರ್ತರನ್ನು ಸೇರಿಸಬೇಕು. ತಲಾ ಮೂವರು ಗ್ಯಾರಂಟಿ ಫಲಾನುಭವಿಗಳು, ಮಹಿಳೆಯರು, ಸಕ್ರಿಯ ಸಾಮಾಜಿಕ ಮಾಧ್ಯಮ ವ್ಯಕ್ತಿ, ಯೂತ್ ಕಾಂಗ್ರೆಸ್ ಸದಸ್ಯರು, ಪಕ್ಷದ ಹಿರಿಯರು ಬೂತ್ ಕಮಿಟಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಇಂಡಿಯಾ ಘಟಬಂದನ್ ಅಧಿಕಾರಕ್ಕೆ ಬಂದರೆ ಮತ್ತಷ್ಟು ಭರವಸೆಗಳನ್ನು ಈಡೇರಿಸುವುದಾಗಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಉದ್ಯೋಗ ಭರ್ತಿಗೆ ಒತ್ತು ನೀಡಲಾಗುವುದು. ಒಂದು ವರ್ಷ ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ತರಬೇತಿ ನೀಡುವುದು, ಮಹಿಳೆಯರಿಗೆ ಶೇ.೫೦ರಷ್ಟು ಉದ್ಯೋಗ ನೀಡುವುದು, ಜಿಲ್ಲಾಮಟ್ಟದಲ್ಲಿ ಮಹಿಳೆಯರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡುವುದಾಗಿ ಘೋಷಿಸಿದ್ದು ಜನರಿಗೆ ಮನವರಿಕೆ ಮಾಡಬೇಕಿದೆ. ಜಿಲ್ಲಾ ಕಾಂಗ್ರೆಸ್ ಕೊಟ್ಟ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಮಾಡಲೇಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕೆಪಿಸಿಸಿ ವಕ್ತಾರ ’ಆಯನೂರು ಮಂಜುನಾಥ, ಮಾಜಿ ಎಂಎಲ್‌ಸಿ ಆರ್. ಪ್ರಸನ್ನಕುಮಾರ್, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮುಖಂಡರಾದ ಎಂ. ಶ್ರೀಕಾಂತ್ ಇತರರಿದ್ದರು.
……