ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾ.೨೦ ರಂದು ಬುಧವಾರ ನಗರಕ್ಕೆ ಆಗಮಿಸುತ್ತಿದ್ದಾರೆ. ಟಿಕೆಟ್ ಘೋಷಣೆಯಾದ ನಂತರ ಅವರು ಇದೇ ಮೊದಲ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದು, ಅವರಿಗೆ ಭವ್ಯ ಸ್ವಾಗತ ಕೋರಲು ಜಿಲ್ಲಾ ಕಾಂಗ್ರೆಸ್ ಸಮಿತಿ ಸಜ್ಜಾಗಿದೆ.
ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಿಯೂ ಕ್ಷೇತ್ರಕ್ಕೆ ಕಾಲಿಡದ ಗೀತಾ ಶಿವರಾಜ್ ಕುಮಾರ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳೇ ನಡೆದಿದ್ದವು. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ ಎನ್ನುವಂತಹ ಮಾತುಗಳು ಕೂಡ ಕೇಳಿ ಬಂದಿದ್ದವು. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ನಾಯಕರಿಗೂ ಹಲವು ಬಾರಿ ಪ್ರಶ್ನೆಗಳು ಎದುರಾಗಿದ್ದವು. ಅದಕ್ಕೆ ತಮ್ಮದೇ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಉತ್ತರಿಸಿ, ಸಮರ್ಥಿಸಿಕೊಂಡಿದ್ದರಾದರೂ, ಈಗ ಅಧಿಕೃತವಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರಕ್ಕೆ ಎಂಟ್ರಿಯಾಗುತ್ತಿದ್ದಾರೆ.
ಮಾ. ೨೦ ರಂದು ಬುಧವಾರ ಬೆಳಗ್ಗೆ ಅವರು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ, ನಟ ಶಿವರಾಜ್ ಕುಮಾರ್ ಅವರು ಕೂಡ ಇರಲಿದ್ದಾರೆ. ಬೆಳಗ್ಗೆ ೧೦ ಗಂಟೆಗೆ ಭದ್ರಾವತಿ ತಾಲೂಕು ಗಡಿ ಭಾಗ ಬಾರಂದೂರಿ ನಲ್ಲಿಯೇ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿ, ಕ್ಷೇತ್ರಕ್ಕೆ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಅಲ್ಲಿಂದ ಭದ್ರಾವತಿಗೆ ಬಂದು, ಅಲ್ಲಿ ಪಕ್ಷದ ಕಾರ್ಯಕರ್ತರಿಂದ ಸ್ವಾಗತ ಸ್ವೀಕರಿಸಿದ ನಂತರ ಶಿವಮೊಗ್ಗಕ್ಕೆ ಬರಲಿದ್ದಾರೆ.
ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಆಗಮನದ ಕುರಿತಂತೆ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ಅವರು ಮಾಹಿತಿ ನೀಡಿದರು.ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಬುಧವಾರ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಅವರನ್ನು ಬಹಳ ಸಂಭ್ರಮದಿಂದ ಬರ ಮಾಡಿಕೊಳ್ಳಲಾಗುತ್ತಿದೆ. ಭದ್ರಾವತಿ ತಾಲೂಕು ಬಾರಂದೂರಿನಲ್ಲಿ ಮೊದಲು ಅವರಿಗೆ ಸ್ವಾಗತ ಕೋರಿ ನಗರಕ್ಕೆ ಕರೆದುಕೊಂಡು ಬಂದ ನಂತರ ಎಂ.ಆರ್. ಎಸ್ ವೃತ್ತದಲ್ಲಿ ಅದ್ದೂರಿ ಸ್ವಾಗತ ನೀಡಲಾಗುತ್ತದೆ. ಅಲ್ಲಿಂದ ರಾಲಿ ಮೂಲಕ ಅವರನ್ನು ಕರೆತರಲಾಗುತ್ತದೆ ಎಂದರು.
ಬೆಳಗ್ಗೆ ೧೧ -೩೦ಕ್ಕೆ ನಗರದ ಸಾಗರ ರಸ್ತೆ ಲಗಾನ್ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ನೇತೃತ್ವದಲ್ಲಿಯೇ ನಡೆಯಲಿದೆ. ಸಭೆಯಲ್ಲಿ ಸಚಿವ ಮಧುಬಂಗಾರಪ್ಪ, ಶಾಸಕ ಸಂಗಮೇಶ್, ಗೋಪಾಲಕೃಷ್ಣ ಬೇಳೂರು ಸೇರಿದಂತೆ ಜಿಲ್ಲೆಯ ಎಲ್ಲಾ ಮುಖಂಡರು, ಜಿಲ್ಲಾ ಮಟ್ಟದ ಕಾರ್ಯಕರ್ತರು, ವಿವಿಧ ಘಟಕಗಳ ಮುಖ್ಯಸ್ಥರು, ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ಭಾಗವಹಿಸುತ್ತಾರೆಂದು ತಿಳಿಸಿದರು.
ಉಸ್ತುವಾರಿ ಸಚಿವರು ಸೇರಿದಂತೆ ಪಕ್ಷದ ನಾಯಕರ ಸಮ್ಮುಖದಲ್ಲಿ ನಡೆಯುತ್ತಿರುವ ಈ ಸಭೆಯು ಪಕ್ಷದ ಪ್ರಚಾರದ ಕುರಿತ ಸಭೆ ಆಗಿದೆ. ಅಭ್ಯರ್ಥಿಯಾಗಿರುವ ಗೀತಾ ಶಿವರಾಜ್ ಕುಮಾರ್ ಅವರು ಇಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವ ಮೂಲಕ ಪಕ್ಷದ ಗೆಲುವಿನ ಮಹತ್ವವನ್ನು ತಿಳಿಸಲಿದ್ದಾರೆ. ಸರ್ಕಾರದ ಜನಪರ ಕಾರ್ಯಕ್ರಮಗಳ ಮೂಲಕ ನಾವು ಮತದಾರರ ಮನೆ ಬಾಗಿಲಿಗೆ ಹೇಗೆ ಹೋಗಬೇಕು, ಯಾಕಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆನ್ನುವುದನ್ನು ಮತದಾರರಲ್ಲಿ ಮನದಟ್ಟು ಮಾಡುವ ಬಗ್ಗೆ ಮಾತನಾಡಲಿದ್ದಾರೆಂದು ಸುಂದರೇಶ್ ವಿವರಿಸಿದರು.
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ. ಗ್ಯಾರಂಟಿಗಳ ಬಲ ನಮಗಿದೆ. ಜನರ ಆಶೋತ್ತರಗಳಿಗೆ ಸದಾ ಸ್ಪಂಧಿಸುತ್ತ ಬಂದಿದೆ. ಗೀತಾ ಶಿವರಾಜ್ಕುಮಾರ್ ಈ ಬಾರಿ ಗೆದ್ದೆಗೆಲ್ಲುತ್ತಾರೆ ಬಿಜೆಪಿಯ ಭಿನ್ನಮತ ಇದಕ್ಕೆ ಸಹಕಾರ ನೀಡಲಿದೆ. ಒಂದು ಪಕ್ಷ ಕೆ.ಎಸ್.ಈಶ್ವರಪ್ಪನವರು ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ನಿಂತರೆ ಅದು ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಕೊಡುಗೆಯಾಗಲಿದೆ. ಅದೇನೆಯಿದ್ದರು ಈ ಬಾರಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಎಸ್.ಟಿ.ಚಂದ್ರಶೇಖರ್, ಚಂದ್ರಭೂಪಾಲ್, ರಮೇಶ್ ಶಂಕರಘಟ್ಟ, ಹೆಚ್.ಸಿ.ಯೋಗೀಶ್, ಮಂಜುನಾಥ್ ಬಾಬು, ಜಿ.ಡಿ.ಮಂಜುನಾಥ್, ಚಂದನ್, ಎನ್.ಡಿ. ಪ್ರವೀಣ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.