ಬಹು ದಿನಗಳ ಅಜ್ಞಾತವಾಸಕ್ಕೆ ವಿದಾಯ ಹೇಳಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕೊನೆಗೂ ಬಿಜೆಪಿಯಲ್ಲಿಯೇ ಕಾಣಿಸಿಕೊಂಡಿರುವುದು ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವು ಉಹಾಪೋಹಗಳಿಗೆ ಆ ಮೂಲಕ ಬ್ರೇಕ್ ಬಿದ್ದಿದೆ. ಜತೆಗೆ ಅಪಪ್ರಚಾರಗಳಿಗೆ ತೆರೆ ಬಿದ್ದಂತಾಗಿದೆ. ಈಗ ಕುಮಾರ್ ಬಂಗಾರಪ್ಪ ಬಿಜೆಪಿಯೇ ಇದ್ದು, ಆ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆನ್ನುವುದು ಖಚಿತವಾಗಿದೆ.
ಮಾ.೧೮ ರಂದು ಸೋಮವಾರ ಅವರು ಪ್ರಧಾನಿ ಮೋದಿ ಅವರ ಸಮಾವೇಶದಲ್ಲಿ ಪಾಲ್ಗೊಳ್ಳಲು ಕುಮಾರ್ ಶಿವಮೊಗ್ಗ ನಗರದ ಅಲ್ಲಮ ಪ್ರಭು ಮೈದಾನದಲ್ಲಿನ ವೇದಿಕೆ ಎಂಟ್ರಿಯಾಗಿದ್ದು, ಸಂಚಲನವೇ ಸೃಷ್ಟಿಸಿತು.
ಅವರು ಸಮಾವೇಶಕ್ಕೆ ಆಗಮಿಸುತ್ತಿದ್ದಂತೆಯೇ ಸಭಿಕರಿಂದ ಭಾರೀ ಕರತಾಡನ, ಘೋಷಣೆ, ಸಿಳ್ಳೆ ಕೇಕೆಗಳು ಕೇಳಿ ಬಂದಿದ್ದು, ಬಿಜೆಪಿ ನಾಯಕರೇ ಗಲಿ ಬಿಲಿಯಾಗುವಂತೆ ಮಾಡಿತು.
ವಿಧಾನಸಭೆ ಚುನಾವಣೆಯ ಸೋಲಿನ ನಂತರ ಜಿಲ್ಲೆಯಲ್ಲಿ ಪಕ್ಷದ ಚಟುವಟಿಕೆಗಳಿಂದಲೇ ದೂರ ಉಳಿದಿದ್ದು ಕುಮಾರ ಬಂಗಾರಪ್ಪ, ಲೋಕಸಭೆ ಚುನಾವಣೆಯ ಪೂರ್ವ ತಯಾರಿಯ ಸಮಾವೇಶಗಳಲ್ಲೂ ಭಾಗವಹಿಸದೆ ಇದಿದ್ದು ಅನೇಕ ಬಗೆಯ ಅಂತೆ ಕಂತೆಗಳನ್ನು ಸೃಷ್ಟಿಸಿತ್ತು. ಅವರು ಕಾಂಗ್ರೆಸ್ ಕಡೆ ಮುಖಮಾಡಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯೂ ಆಗಲಿದ್ದಾರೆಂಬ ಸುದ್ದಿಗಳು ಇದ್ದವು. ಒಂದು ಹಂತದಲ್ಲಿ ಬಿಜೆಪಿ ನಾಯಕರು ಕೂಡ ಅವರ ನಡೆಯ ಕುರಿತು ಪ್ರತಿಕ್ರಿಯಿಸದೆ ನಿರ್ಲಕ್ಷ್ಯಿಸುವ ಹಂತಕ್ಕೂ ಬಂದಾಗಿತ್ತು. ಈ ಹಂತದಲ್ಲಿ ಅವರು ಕಾಂಗ್ರೆಸ್ ಸೇರುವುದು ಖಚಿತ ಅಂತಲೂ ಸುದ್ದಿಗಳಿದ್ದವು. ಹಾಗೇನಾದರೂ ಅವರು ಕಾಂಗ್ರೆಸ್ ಸೇರಿದ್ದರೆ ಜಿಲ್ಲೆಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳಾಗಲಿದ್ದವು.
ಈ ನಡುವೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಎಂಬುದಾಗಿ ಘೋಷಣೆಯಾದಾಗಲೂ ಕುಮಾರ್ ಬಂಗಾರಪ್ಪ ಮೌನವಾಗುಳಿದಿದ್ದು, ಜಿಲ್ಲೆಯಲ್ಲಿ ಇನ್ನೊಂದು ಬಗೆಯ ಅಪಪ್ರಚಾರಕ್ಕೆ ನಾಂದಿ ಹಾಡಿತ್ತು. ಈ ಬಾರಿ ಅವರು ಲೋಕಸಭಾ ಚುನಾವಣೆಗೆ ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡದೆ ಮೌನವಾಗುಳಿಯುವುದು ಖಚಿತ. ಬದಲಿಗೆ ಅವರು, ಪರೋಕ್ಷವಾಗಿ ತಮ್ಮ ತಂಗಿಯ ಗೆಲುವಿಗೆ ಶ್ರಮಿಸಲಿದ್ದಾರೆಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಅವೆಲ್ಲಕ್ಕೂ ಈಗ ಅವರು ಎಳ್ಳು ನೀರು ಬಿಟ್ಟಿದ್ದಾರೆ.
ಕುಮಾರ್ ಬಂಗಾರಪ್ಪ ಇಷ್ಟು ದಿನ ಯಾಕಾಗಿ ಅಜ್ಞಾತವಾಸದಲ್ಲಿದ್ದರೂ, ಪಕ್ಷದಲ್ಲಿ ಅವರು ಎನ್ನನ್ನು ಬಯಸಿದ್ದರು ಎನ್ನುವುದು ಇನ್ನು ನಿಗೂಢವಾಗಿಯೆ ಇದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಅವರು ಬಿಜೆಪಿಯಲ್ಲಿಯೇ ಇದ್ದು, ಪಕ್ಷದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಗೆಲುವಿಗಾಗಿ ಶ್ರಮಿಸಲಿದ್ದಾರೆಂಬ ಸಂದೇಶ ಸೋಮವಾರ ರವಾನೆ ಆಗಿದೆ. ಮಾ. ೧೮ ರ ಮೋದಿ ಅವರ ಸಮಾವೇಶದಲ್ಲಿ ಕಾಣಿಸಿಕೊಳ್ಳುವ ಮೂಲಕ ತೋರಿಸಿಕೊಟ್ಟಿದ್ದಾರೆ. ಇದು ಅವರ ವಿರೋಧಿ ಪಾಳಯಕ್ಕೆ ದೊಡ್ಡ ಶಾಕ್ ನೀಡಿದೆ.
.
ReplyForwardAdd reaction |